Tuesday, March 26, 2013

ಕನಸಿನೊಡನೆ ಒಂದರೆಕ್ಷಣ...

ಇಂದು ನಿರ್ಧರಿಸಿಯೇ ಬಿಟ್ಟಿರುವೆ
ನಿನ್ನೊಡನೆ ಒಂದರೆ ನಿಮಿಷ ಮಾತಾಡಲೇ ಬೇಕೆಂದು
ಕಣ್ಣಲ್ಲಿ ಕಣ್ಣಿಟ್ಟು, ಕಣ್ಣೀರು ಹರಿಯುವ ಮುನ್ನ
ಮಾತು ಜಗಳದಲಿ ಕೊನೆಯಾದರೆ ಕ್ಷಮೆಯಿರಲಿ
ಕಡೆಗೆ ಕೇಳಲು ಕಷ್ಟ, ಈಗಲೇ ಕ್ಷಮಿಸಿಬಿಡು ನನ್ನ

ಕನಸೇ, ಕೇಳಿಲ್ಲಿ, ನಿನ್ನಲ್ಲಿ ನನ್ನದೊಂದು ಪುಕಾರು
ರಾತ್ರಿಯೆಲ್ಲಾ ರಮಿಸಿ ಮುಂಜಾವಿಗೆ ಮಾಯವಾಗುವ
ನಿನ್ನ ಪರಿ ನನಗೊಂದು ಅರ್ಥವಾಗದ ವಿಚಿತ್ರ ಒಗಟು
ಈಗೀಗ ಕಣ್ತೆರೆಯಲೂ ಭಯ, ಎಲ್ಲಿ ನಿನ್ನ ಮದುರ
ಮಾರ್ಧವತೆ ಮಧ್ಯದಲ್ಲೇ ಮೌನವಾಗುವುದೋ ಎಂದು

ಹೇಳು, ಯಾಕೆ ನನ್ನೊಳಗಿಂಥಾ ಅಪರಾಧಿ ಭಾವ?
ಧರ್ಮದ ಸೂಕ್ಷ್ಮಾತಿಸೂಕ್ಷ್ಮಗಳ ಹೇಳಿಕೊಟ್ಟವಳು ನೀನೇ ತಾನೇ?
ನೀತಿ-ನ್ಯಾಯಗಳ ಗಾಳಕ್ಕೆ ಸಿಗದ ಗಂಧರ್ವ ಕನ್ಯೆ ನೀನು
ಎಂದಲ್ಲವೇ ನಿನ್ನ ಅಷ್ಟೊಂದು ನಂಬಿದೆ, ಪ್ರೀತಿಸಿದೆ?
ಹೇಳು, ನನ್ನನೀ ಪರಿ ಕಾಡುವುದರ ಮರ್ಮವಾದರೂ ಏನು? 

ನೀನೊಡನಿರುವಾಗ ಜಗತ್ತು ಅದೆಷ್ಟು ಸುಂದರ
ಎಲ್ಲವ ಮೀಟುವ ಎಲ್ಲರ ಮೀರುವ ಅತೀವ ಛಲ
ಯಾರ ಅಂಕೆಗೂ ನಿಲುಕದೆ ನಿರಾತಂಕವಾಗಿ
ಏರುತ್ತಾ, ಹಾರುತ್ತಾ, ಎಲ್ಲೆ ಮೀರಿ ಪದತಟ್ಟುವ ಬಲ
ಕಣ್ಣು ತೆರೆದಾಗ ಮತ್ತದೇ ಬೀಭತ್ಸ ಸತ್ಯ, ನೀ ಜೊತೆಯಲಿಲ್ಲ... 

ಇಂದು ನೀ ನೀಡಲೇಬೇಕು, ಕಡೇ ಪಕ್ಷ ಒಂದಾದರೂ ಸಬೂಬು
ಕನಸು ನೀ ಕನಸಾಗಿಯೇ ಸಾಯುವ ತವಕವೇ?
ಅಲ್ಲ, ಅಪ್ಪಿ ತಪ್ಪಿ ನನಸಾದೇನೆಂಬ ಭಯವೇ?
ಇಲ್ಲ, ಇವನಿಗೆಲ್ಲಿ ಅರಸನಾದೇನೆಂಬ ಭ್ರಮೆಯೇ?
ಹೇಳು, ಯಾಕೀ ಪರಿ ನನ್ನ ಸಾಯಗೊಡದೆ ಕೊಲ್ಲುವೆ?

ಉತ್ತರ, ಸಬೂಬು ಇಲ್ಲದಿರೆ ಹೋಗಲಿ ಬಿಡು,
ಪಾಪ, ನನ್ನಂತೆ ನೀನೂ ಅಸಹಾಯಕಳೋ ಏನೋ
ನಿನ್ನೊಳಗೂ ಉಂಟೇನೋ ಅದೆಷ್ಟೋ ಸಾವಿರ ನೋವು
ಆದರೊಂದು ಬೇಡುವೆ ನಿನ್ನ, ಇಲ್ಲ ಎನ್ನದಿರು ಕನವೇ,
ನಿನ್ನದೇ ಆಲಾಪನೆಯಲ್ಲಿ ಸದಾ ನಿದ್ದೆ ಹೋಗಿಬಿಡುವ
ಕಣ್ತೆರೆಯದೇ ಕನವರಿಸುವ ಕಲೆಯೊಂದ ಹೇಳಿಕೊಡುವೆಯಾ ನನಗೆ?