Monday, August 22, 2011

ಲುಪ್ತ ...

ಯಾರು, ಯಾರಿಗೆ, ಯಾಕೆ ... ?
ಉತ್ತರವಿಲ್ಲದೆ, ಲುಪ್ತ ತಾನೆಂಬ ಅರಿವಾಗಿ  
ಪರಿತಪಿಸಿದವನು ನಾನು ಮತ್ತು ನೀನೂ
ಬಿರುಕಿನ ಆಚೀಚೆ ನನ್ನ ನಿನ್ನ ಬದುಕು
ಒಂದೇ ನೆತ್ತರು ನಮ್ಮಿಬ್ಬರಲಿ
ಒಂದಾಗಿ ಬೆಳೆದದ್ದು ಒಂದೇ ಸೂರಿನಡಿ
ಏನಾದರೂ ಕೇಳಿಸೀತೇ ಬಿರುಕಿನ ಆಚೀಚೆ?
ಕೇಳಿಸದೇ? ಕತ್ತಿ ಮಸೆಯುವ ಸದ್ದು
ಅಂದು ಒಡಹುಟ್ಟಿದವರೆಂಬ ವಾಂಛೆ
ಇಂದು ದಾಯಾದಿಗಳ ಹುನ್ನಾರ ಮತ್ತು ಸಂಚು

ಆಚೀಚಿನ ಬೀದಿಗಳಲ್ಲಿ ಬೆಳೆದಿದ್ದರೆ ಎಷ್ಟು ಸೊಬಗಿತ್ತು
ಯಾರು, ಯಾರಿಗಾಗಿ, ಯಾರನ್ನು ಕಳಕೊಂಡೆವೋ ...
ಒಂದೇ ಸೂರಿನಡಿ, ಕೆಲವೊಮ್ಮೆ ಒಂದೇ ಮೇಣದಡಿ...
ಅಯ್ಯೋ ಪ್ರಾರಬ್ಧವೇ, ನಿನ್ನ ನಾ ತೊರೆಯಬೇಕಾಯ್ತೇ!
ಹೆಣ್ಣೊಂದು ಈ ಪರಿ ಕೊಲ್ಲಬಹುದೇ!
ನೆತ್ತರಲಿ ಪಾಲಿಲ್ಲದ, ಸೂರಿನಡಿ ಸುಳಿವಿಲ್ಲದ
ಈಗ ಮಾತ್ರ ಅಧಿಕಾರಿಯಾಗಿ
ಒಡನಾಟದ ಆ ಹಲವು ದಶಕಗಳ ಹೀಗೆ ಹೊಸಕುವುದೇ!
ಒಡನಾಡಿ ಇವಳೆಂಬುದೊಂದು ಪೊಳ್ಳು ಹಾಸ್ಯ ತಾನೇ?

ನಿನ್ನ ಹೆಗಲೇರಿ ಕುಳಿತಾಗ ಅಂದು ಎಂಥಾ ಮುದವಿತ್ತು
ಮತ್ತೆ ಹೆಗಲ ಮೇಲೆ ಕೈ ಹಾಕಿ ನಡೆದಾಗಲೂ...
ನನಗೆ ನೀನು, ನಿನಗೆ ನಾನು.
ಛಾವಡಿಯಲ್ಲಿ ಕುಳಿತ ಅಮ್ಮ ನಕ್ಕಿದ್ದೇನು
ಬೀಡಿಯ ಹೊಗೆ ಉಗುಳುತ್ತಾ ಅಪ್ಪ ಬೀಗಿದ್ದೇನು
ಎಲ್ಲರಂತಲ್ಲ ನಮ್ಮ ಪಿಂಡಗಳು
ತುಂಡು ಪೆಪ್ಪರಮೆಂಟಿಗಾಗಿ ಜಗಳ ಕಾದಾಟ
ನೆರೆಮನೆಯ ಪ್ರತಿದಿನದ ಹಾಡು
ಆದರಿಲ್ಲಿ ಸ್ನೇಹ, ಪ್ರೀತಿ ಮತ್ತು ಬರೀ ಅವೇ...

ನೆನಪಾಗಿ ಕಣ್ಣು ಒದ್ದೆಯಾದರೂ
ಅದೇ ನೀರು ಮಸೆವ ಕತ್ತಿಗೆ ಸಾಣೆ ಹಿಡಿಸಿತಲ್ಲಾ
ಯಾರು ನಂಬಾರು ಹೇಳು
ಹೆಣ್ಣೊಂದು ನಿನ್ನ ನನ್ನಿಂದ ಕದ್ದೊಯ್ದ
ಕಹಿಯಾದರೂ ನುಂಗಬೇಕಾದ ಸತ್ಯ
ಎಷ್ಟೋ ಸಬೂಬುಗಳು, ಅದೆಷ್ಟೋ ಜವಾಬುಗಳು
ಲುಪ್ತತೆಯ ನಂಬದಿರಲು ನೂರಾರು ಯತ್ನಗಳು 
ನಂಬಿ ಏನಾಗಬೇಕು, ಲಾಭ-ನಷ್ಟಗಳ ಲೆಕ್ಕಾಚಾರ
ಈಗ ಬರೀ ಅರ್ಥಹೀನ. ಹೌದು, ಬರೀ ಅರ್ಥ-ಹೀನ!