Saturday, June 20, 2020

ಅಪ್ಪಾ...


"ಅಪ್ಪಾ" ಎಂಬ ಎರಡಕ್ಷರದಲಿ
ಅದೇನು ಮಾಯೆಯಡಗಿಹುದೋ!

ಅಮ್ಮನಂತೆ ಅಪ್ಪಿ ಹಿಡಿದು "ಮಗನೇ" ಎನ್ನಲಿಲ್ಲ
ಮಡದಿಯಂತೆ ಮೈಸವರಿ "ಐ ಲವ್ ಯೂ" ಎನ್ನಲಿಲ್ಲ

ಆದರೇನಂತೆ...

ನಾ ಬಿದ್ದಾಗ ಹಿಡಿದೆತ್ತುವ ನಿನ್ನ ತೋಳ್ಗಳೇ ಸಾಕೆನಗೆ
ಮತ್ತೆ ಮತ್ತೆ ಎದ್ದು ನಡೆಯಲು

ನಾ ಗೆದ್ದಾಗ ನಿನ್ನ ಕಣ್ತುಂಬುವ ಅಶ್ರುಬಿಂಧು ಸಾಕೆನಗೆ
ಮತ್ತೆ ಮತ್ತೆ ಗೆದ್ದು ಬರಲು...

ಉಸಿರೊಳಗೆ ಉಸಿರಾಗಿ ಚಿರಕಾಲ ಉಳಿದಿರು
ಓ ಎನ್ನ ಜೀವದಾತ...

Thursday, April 23, 2020

ಒಲವಿನೊರತೆ...


ನಿಮಿಷಗಳು ವರುಷಗಳು ಉರುಳುತಿರಲೇನು 
ನಿಲದೆ ಹರಿವ ಒಲವಿನೊರತೆ ನೀನು-ನಾನು 

ತೂಫಾನು ಬಿರುಬಿಸಿಲು ತಟ್ಟಿದರೂ ನಮ್ಮೊಡಲು 
ನಮಗಿಲ್ಲ ಇಲ್ಲಿ ಯಾವ ಚಿಂತೆ-ದಿಗಿಲು 

ಆ ದೇವನೆಮ್ಮ ಒಲವಿನೊಸರಾಗಿರಲು 
ಅದಾವ ಸುಳಿಯ ಭೀತಿಯೇಕಿನ್ನು?...   

Sunday, March 22, 2020

ದಾಂಪತ್ಯ...


ಮದುರ ಮೈತ್ರಿಯಲಿ 
ಸದರ ಸಲುಗೆಯಲಿ 
ಬೆಸೆದ ಬೆಸುಗೆಯಿದು 
ಸದಾ ಹೊಸತು ನಮ್ಮೀ ದಾಂಪತ್ಯ 

ಯಾರ ಈರ್ಷ್ಯೆಗೂ ಮುರಿಯದ 
ಯಾವ ಕ್ಲೇಶಕೂ ಮಣಿಯದ 
ದೇವನೊಲುಮೆಯ ತಬ್ಬಿ ನಿಂತಿಹ 
ದಿವ್ಯ ಮಿಲನ ನಮ್ಮೀ ದಾಂಪತ್ಯ