Tuesday, February 7, 2012

ಎಲ್ಲ ಬಲ್ಲವಳು...

ಎಲ್ಲಾ ನಡೆದಿದ್ದೂ ಅಲ್ಲಿಯೇ, ಆ ಪುಟ್ಟ ಹಳ್ಳಿಯಲ್ಲಿ
ಎಲ್ಲ ಬಲ್ಲವಳು ಅವಳೊಬ್ಬಳೇ, ಆ ಪುಟ್ಟ ಹುಡುಗಿ
ಅಲ್ಲೇ ನಿಂತಿದ್ದು, ಕಣ್ಣೆದುರೇ ಕಂಡಳಲ್ಲಾ
ಆ ರಾಕ್ಷಸರ ಅಟ್ಟಹಾಸ...
ಒಂದು ನಿಮಿಷ...! ಅಲ್ಲಿದ್ದವಳು ಇವಳೊಬ್ಬಳೇನಲ್ಲ!
ಕಣ್ಣಿದ್ದೂ ಕುರುಡಾದ ಹೇಡಿ ಜೀವಗಳು ಅವೆಷ್ಟೋ!

ಎಲ್ಲ ಬಲ್ಲವಳು ನಾನು ಮಾತ್ರ...
ಬಾವಿಯ ನೀರು ಬತ್ತಿದ್ದು, ದಾಹ ಇಂಗದೇ ಹೆಚ್ಚಿದ್ದು,
ಸಮಜಾಯಿಷಿಯ ಹಲವು ಯೋಚನೆಗಳು ಹುಟ್ಟಿದ್ದು,
ಮತ್ತವು ಗಳಿಗೆಗೊಮ್ಮೆ ಬದಲಾದದ್ದು, ಕಡೆಗೊಮ್ಮೆ
ಹುಚ್ಚು ಧೈರ್ಯ ಗರಿಗೆದರಿ ನಾಟ್ಯವಾಡಿದ್ದು...
ನನಗೆ ತಿಳಿಯದ ಸತ್ಯ ಮತ್ಯಾರು ತಿಳಿದಾರು!

ನೋವ ಉಂಡೂ ತೆಪ್ಪಗಿರಲು ನಮಗೇನು ತೆವಲೇ?
ನಾವೂ ಕಂಡು ಬೆರಗಾಗಿ, ಕೋಪಗೊಂಡು,
ಸಿಡಿದೇಳ ಹೊರಟಾಗ ಆ ಹುಡುಗಿ ಸುಮ್ಮನಿದ್ದಿದ್ದರೆ...
ಯುದ್ಧವಾಗಿ ಹೋಗುತ್ತಿತ್ತು, ಈ ನಮ್ಮ ಹಳ್ಳಿಯಲ್ಲಿ
ಎಲ್ಲ ಬಲ್ಲೆನೆಂದು ಆಕೆ ಮೂಗುತೂರದೇ ಇದ್ದಿದ್ದರೆ
ಏನಾಗಬೇಕಿತ್ತು? ರೋಧನವೇ? ಇಲ್ಲ ಮತ್ತೊಂದು ಕೊಲೆಯೇ?

ರೋಧಿಸುವ ಕಾರಣ ಅರಿತಿದ್ದಿದ್ದರೆ ಎಷ್ಟೋ ಒಳಿತಿತ್ತು
ನನ್ನಮ್ಮ ಅಂದು ಬೊಗಸೆ ನೀರಿಗಾಗಿ ಬೆತ್ತಲಾದಾಗ
ಲುಂಗಿ-ಹರುಕರ ಜೊಲ್ಲು ಉಣಲು ಪ್ರತಿಭಟಿಸಿದಾಗ
ಟಿ.ವಿ ಪರದೆಯಲಿ ಕಂಡಂತೆ ಕಾಣಲಿಲ್ಲವೇ ನೀವು?
ನ್ಯಾಯಾನ್ಯಾಯದ ಜಟಿಲ ಪ್ರಶ್ನೆಗಳಿಗೆ ಉತ್ತರ ನನ್ನಲ್ಲಿದೆ
ಎಲ್ಲ ಬಲ್ಲವಳ ಕೇಳುವ ಧೈರ್ಯ ನಿಮಗೆಲ್ಲಿದೆ?

ಯುದ್ಧವಾಗಿದ್ದರೆ ಒಳಿತಿತ್ತು, ಆ ಪುಟ್ಟ ಹಳ್ಳಿಯಲ್ಲಿ
ಅಲ್ಲಿ ನಡೆದಿದ್ದು ಮಾರಣ ಹೋಮ, ಅಮಾಯಕಳ ಕಗ್ಗೊಲೆ
ಬಾವಿ ನೀರು ಬತ್ತಿದ್ದು ಅಮ್ಮನ ತಪ್ಪೇ
ಬೊಗಸೆ ನೀರಿಗಾಗಿ ರೋಧಿಸಿದ್ದು ತನ್ನ ತಪ್ಪೇ
ಉತ್ತರ ಸಿಗದೆ ಕೇಳುತ್ತಾಳೆ, ಎಲ್ಲ ಬಲ್ಲ ಆ ಪುಟ್ಟ ಹುಡುಗಿ
"ಅಮ್ಮ, ನೀನು ಹಟ್ಟಿಯೊಳಗೇ ಇದ್ದಿದ್ದರೆ... ?"