Monday, April 4, 2011

ನಿನ್ನ ಪಥ...

ನಾನಾಗ ಬಯಸುವೆ  
ನಿನ್ನಂತೆ ಮನೆ ಇಲ್ಲದ ಪಕೀರ
ಸದಾ ಸೇರ ತವಕಿಸುವೆ   
ಕೊನೆ-ಮೊದಲಿಲ್ಲದ ಸಾಗರ
ನಿನ್ನ ಗುರಿ ನನ್ನದಾಗಲೆಂಬ
ಬಯಕೆಯ ಬೆನ್ನೇರಿ
ಸದಾ ಹರಿಯ ಯತ್ನಿಸುವೆ  
ಎಲ್ಲ ಮಲಿನವ ಹೊತ್ತು
ಏನನೂ ನುಂಗದೆ,
ಏನನೂ ಉಗುಳದೆ
ನಾ ಸಾಗ ಬಯಸುವೆ 
ನಿನ್ನಂತೆ...

ನಿನ್ನ ದಾಟುವರು 
ಹಲವು ತೀರ್ಥಯಾತ್ರಿಗಳು
ತೀರ್ಥದ ಮೇಲೆಯೇ 
ಪಯಣಿಸಿಹೆವೆಂಬ
ಅರಿವು ಅವರಿಗುಂಟೆ?
ಹಲವರ ಜೀವದ ದೌಡಿಗೆ
ನೀನೊಂದು ಅಡ್ಡಬೇಲಿ
ಕೆಲವರಿಗೆ ದಿಗಂತಗಳ
ಒಂದಾಗಿಸುವ ಸೇತುಬಂಧಿ
ನಿನ್ನ ಸಂಚಲನಕೆ ಕಿವಿಗೊಟ್ಟು
ಮೈಮರೆತ ಕೆಲವೇ ಮಂದಿಗೆ 
ನೀನಾದೆ ಮಧುರ ನಿನಾದ...

ಭೂತದ ನೆರಳ
ನೀ ಹೊತ್ತು ತರಲಿಲ್ಲ
ಭವಿಷ್ಯದ ಛಾಯೆ
ನಿನ್ನ ಮೇಲಿಲ್ಲ...
ವರ್ತಮಾನದಲಿ 
ಜೀವಂತವಾಗಿರುವ
ಕಾಲಾತೀತಳು ನೀನು
ಕಾಲವನು ಗೆದ್ದವಳೆಂಬ
ಭ್ರಮೆ ಎಳ್ಳಷ್ಟೂ ನಿನಗಿಲ್ಲ...

ಎದೆ ಜರಿಯುವುದು
ಒಮ್ಮೊಮ್ಮೆ ನಿನ್ನ ಘರ್ಜನೆಗೆ
ಆಕ್ರಂದಿಸುವೆ, ಬೊಬ್ಬಿಡುವೆ
ಮತ್ತೊಮ್ಮೆ ಗಂಭೀರ ಮಂದಹಾಸ
ಜಗವ ಗೆದ್ದ ದೊರಯಂತೆ
ಪಾಶ ಹರಿದ ಗೂಳಿಯಂತೆ
ಮಗುದೊಮ್ಮೆ ಕೋಗಿಲೆಯಾಗಿ,
ಮತ್ತೆ ಪ್ರಸವಿಸುವ ಹೆಂಗಳೆಯಾಗಿ
ನೂರಾರು ಜೀವಜಂತುಗಳ ಧನಿಗೆ
ನೀ ಧನಿಯಾದೆ
ಸಾವಿರಾರು ಧನಿಗಳು ಸೇರಿ
ನೀನಾದೆ ಓಂಕಾರ ನಾದ
ಸೃಷ್ಟಿಯ ಜೀವದನಿ,
ಸ್ಥಿತ್ವದ ಮೂರ್ತರೂಪ...

ಅಲ್ಲಿ ಹಿಮಾಲಯದ
ತಪ್ಪಲಿನಲ್ಲಿ ಗಂಗೆಯಾಗಿ
ಇಲ್ಲಿ ಆಲ್ಪ್ ಕಣಿವೆಗಳಲ್ಲಿ ರೈನಳಾಗಿ
ಭೂಗೋಳದ ಬಂಧಿಯಾಗದೆ
ಕಾಲನ ಪಾಣಿಯೂ ಆಗದೆ
ಇರುವಿಕೆಯ ಸ್ನಿಗ್ಧ ಸ್ವರೂಪವಾದೆ
ಹರಿಯುವ ವರ್ತಮಾನವಾದೆ
ಇಲ್ಲ, ಕೇವಲ ಆಮ್ಲ-ಜಲಜನಕಗಳ
ಸಂಯೋಗ ಸೂತ್ರವಾದೆ...? 

ನಗಬೇಡ
ವಿಜ್ಞಾನದ ಮೂಢತೆಗೆ!
ನಾಮದ ಅಂಕೆಗೆ
ಕಾಲನ ಬಲೆಗೆ
ನಿನ್ನ ಸಿಕ್ಕಿಸುವ
ಮನುಜ ಮೂರ್ಖತೆಗೆ!

ಅಣುರೇಣುಗಳಲಿ ಮಿಡಿಯುವ
ಓಂಕಾರ ನಾದವೇ,
ಸೃಷ್ಟಿಯ ಜೀವನದಿಯೇ
ನಿನ್ನಂತೆ ಹರಿಯಗೊಡಿಸೆನ್ನ
ನಿನ್ನೊಳಗೆ ಐಕ್ಯವಾಗಿ
ನನ್ನ ನಾ ಕಾಣುವವರೆಗೆ...