Friday, January 18, 2013

ಸಾವು ಮತ್ತು ನೀನು...

ಬಯಸಿದ್ದು ಬಾರದೆ ಬರೇ ಭಯವೇ
ಬದುಕ ಬೆನ್ನಟ್ಟಿ ಬಂದಾಗ
ಬೆಚ್ಚಿ ಬಿದ್ದ ಆ ಎದೆಯನ್ನು ಆಲಂಗಿಸಿದ್ದು
ಪ್ರಜಾಪತಿಯ ಪೌರುಷವೂ ಅಲ್ಲ
ಪಾದ್ರಿಯ ನೀತಿಬೋಧೆಯೂ ಅಲ್ಲ
ತಾತ್ವಿಕನ ನೇತಿಪ್ರೇತಿಗಳೂ ಅಲ್ಲ
ಪ್ರೀತಿ-ಸಂಗಾತಿಯಂತೂ ಮೊದಲೇ ಅಲ್ಲ
ಅದು ಬಯಕೆ ಪರಿದಿ ಮೀರಿದ ಆ ಸಾವು
ಜನುಮದಷ್ಟೇ ದಿಟವಾದ ಜೀವದಷ್ಟೇ ಸವಿಯಾದ
ಸದಾ ಸನಿಹನಿಂತ ಸಂಗಾತಿ ಆ ನಿನ್ನ ಸಾವು

ರಾಜನೀತಿಯಲಿ ಅನೀತಿಯದೇ ರಾಜ್ಯಭಾರ
ಪ್ರಜಾಪತಿ ಇಲ್ಲಿ ಒಬ್ಬನಲ್ಲ ಇಬ್ಬರಲ್ಲ
ಪಾದ್ರಿಗಳೋ, ಬೀದಿ ತುಂಬಾ ಅವರದೇ ಹಾವಳಿ 
ಉಪದೇಶಕರಿಗೆ ಕೊರತೆಯುಂಟೇ ನಮ್ಮೂರಲಿ
ಪ್ರೇಮಿಗಳು ಫರ್ಲಾಂಗಿಗೊಬ್ಬರಂತೆ
ಪ್ರತಿಯೊಬ್ಬನ ಬಗೆಬಗೆಯ ಕಾಮದ ಜೊಲ್ಲಿಗೆ
ಅನಿವಾರ್ಯ ಸೆರಗು ಚಾಚುವ ಸೂಳೆ
ಸಾವನ್ನು ಇಷ್ಟೊಂದು ಪ್ರೇಮಿಸುವ ಹಸುಳೆ
ನೀ ಮಾತ್ರ ಇಲ್ಲಿ ಈಗ ಒಬ್ಬಳೇ...

"ನೋವೆಲ್ಲಾ ಕೊನೆಯಾಗುವ ಒಂದೇ ಮಾರ್ಗ
ಸಾವಲ್ಲದೆ ಇನ್ನಾವುದು ಹೇಳೋ ಮಿತ್ರ"
ಒಗಟು ಒಗಟಾದ ನಿನ್ನ ಒರಟು ಹುಂಬುತನಕ್ಕೆ
ಮರುಗಿ ನಾ ನಿನ್ನ ಬಯ್ಯುವೆ, ಗುದ್ದುವೆ
ನಿದ್ದೆಯಿಂದ ಎಚ್ಚರಾದಾಗ ಒಳಗೊಳಗೇ ನಡುಗುವೆ 
ಸದ್ದು ಮಾಡಿ ನಿನ್ನ ಕೂಗಬೇಕೆನಿಸುತ್ತದೆ
ಸಾವ ಅಪ್ಪಿರುವವಳಿಗೆ ಯಾವ ಕೂಗು ಏನಂತೆ
ಸದಾ ಸುಖಿಯಾಗಿರುವ ನಿನ್ನ ಬಯಕೆ
ಸಾವಿನಲ್ಲಿ ಸಂಪೂರ್ತಿಯಾಗುವುದೇ?

"ಯಾಕಾಗದು? ಯಾಕಾಗಕೂಡದು?
ಸಾವು ಜೀವದ ಕೊನೆಯಾದರೆ
ಬುದ್ಧ, ಗಾಂಧೀ, ಕ್ರಿಸ್ತರು ಹುಟ್ಟಿಯೇ ಇಲ್ಲ"
ನಿನ್ನೀ ಬೋಧಕ್ಕೆ ಏನನ್ನುವರೋ ನಮ್ಮ ಪ್ರಜಾಪತಿಗಳು 
ರಾಜನೀತಿಯಲಂತೂ ಈ ಚರ್ಚೆಗೆ ಪುರುಸೊತ್ತಿಲ್ಲ
ಪಾದ್ರಿಗಳಿಗೀ ಪಾಶಾಂಡ ತರ್ಕ ಸಂಬದ್ಧವಲ್ಲ
ಮೋಹಿ ಪ್ರಿಯಕರ ಇನ್ನೂ ಅಮಲಿನಿಂದಿಳಿದಿಲ್ಲ
ನೀ ಮಾತ್ರ ಅಲ್ಲೇ ನಿಂತಿರುವೆ, ಅಭೀತ ನಿರಾಳ 
ಸಾವ ಬಿಗಿಹಿಡಿದ ನೀನೀಗ ಒಬ್ಬಂಟಿಯೇನಲ್ಲ...