Tuesday, November 24, 2009

ಜಾತಿ ಮಾತು...

ಮತ್ತು ಕೊರಗನಿಗೇಕೆ ಅದು ತಿಳಿಯಲಿಲ್ಲ?
ಮುದ್ದಿನ ನಾಯಿ 'ದೊರೆ' ಇಂದೇಕೆ ಬೊಗಳುತ್ತಿಲ್ಲ?
ಸದಾ ಆರ್ಭಟಿಸುವ ಅವನ ತಗಡಿನ ಡಬ್ಬಿ
ಇಂದು ಮಾತ್ರ ಸದ್ದೇ ಮಾಡದೆ ಸುಮ್ಮನಿದೆಯೇಕೆ?...

ಬಹುಶಃ ತನ್ನ ಕೊರಗನ್ನು ಒಳಗೇ ಅದುಮಿಟ್ಟುಕೊಂಡನೆ
ಛೆ ಛೆ... ಅಂಥ ಅಳುಕಿನವನೇನಲ್ಲ ಕೊರಗ
ತನ್ನ ನಾಯಿಗೆ 'ದೊರೆ' ಎಂದು ಹೆಸರಿಟ್ಟಾಗಲೇ
ಎಲ್ಲರಿಗೂ ತಿಳಿದಿತ್ತು ಇವ ಒಳಗಿನ ಚಳಿಗೆ ಕ್ಯಾರೇ ಅನ್ನದವ

ಡಿಸೆಂಬರ್ ತಿಂಗಳ ಮಲೆನಾಡ ಚಳಿಗೂ ಹೆದರದೆ
ಬರೀ ಮೈಲಿ ಕೇರಿಯ ಹೊರಗೆ ಎದೆ ನಿಗುರಿಸಿ ನಡೆದಾಗ
ಹೇಗೆ ಹೊಳೆಯುತ್ತಿತ್ತು ಅವನ ಮೈಮೇಲಿನ ಬರೆ!!!
ಬೇಕೆಂದೇ ನಡೆದಿದ್ದನೋ ಅಥವಾ ಚಳಿಗಾಲದ ಬಿಸಿಲು
ಹಿತವೆನಿಸಿಯೋ, ಅಥವಾ ಇನ್ನೇನಕ್ಕೋ...

ಅಂತೂ ಮೇಲಿನ ಮನೆಯ ಐತಾಳರ ಹೆಂಡತಿ
ಕಿಡಕಿಯಿಂದ ಇವನನ್ನು ಕದ್ದು ನೋಡಿ ಕಡೆಗೆ
ಸಿಕ್ಕಿ ಬಿದ್ದು ಪಚೀತಿಯಾದದ್ದು ಈಗ ರಹಸ್ಯವೇನಲ್ಲ.
ಪಾಪ, ಕೊರಗನಿಗೇನು ಗೊತ್ತು ಅವಳ ಚರ್ಮ ಬಣ್ಣ!!!

'ದೊರೆ' ಮಾತ್ರ ಸುಮ್ಮನೆ ನಡೆಯುತ್ತಿರಲಿಲ್ಲ
ಅವನ ದಿಟ್ಟ ನಡಿಗೆಗೆ ಒಳಗೊಳಗೇ ಉರಿದು
ಕುಂಯ್ ಕುಂಯ್ ಎಂದು ಬಾಲ ಮುದುಡಿ
ಹಿಂಜರಿಯಲಿಲ್ಲವೇ ಮಾಣಿಯ ಬಿಳೀ ಕುನ್ನಿ.

ಇನ್ನು ಕೊರಗನ ತಗಡಿನ ಡಬ್ಬಿ ಸುಮ್ಮನಿತ್ತೆ?
ಡನ್-ಡಬ... ಡನ್-ಡಬ ತಾಳವಿಲ್ಲದ ಸದ್ದು
ತಿಂಗಳ ರಜೆಯಾಗಿ ಹೊರಗೆ ಮಲಗಿದ್ದ ಬಟ್ಟರ
ಮಗಳು ಎದ್ದು ಹೆದರಿ ಒಳಗೆ ಒಡಲಿಲ್ಲವೇ?

ಆದರೆ ಇಂದು ಮಾತ್ರ ಇದೇನು ಸ್ಮಶಾನ ಮೌನ?
ಕೊರಗ ಸೋತನೆ? ಎಷ್ಟು ಮಾತ್ರಕ್ಕೂ ಇಲ್ಲ...
'ನಾ ಸತ್ರೂ ಸತ್ತೆ, ಆದ್ರೆ ಸೋತು ಸಾಯಲ್ಲ'
ಕೊರಗ ಅಂದು ಗಡಂಗಿನ ಮುಂದೆ ಫುಲ್ ಟೈಟಾಗಿ
ತೊದಲಿದ್ದು ಇನ್ನೂ ನೆನಪಿದೆ... ಕೆಲವರಿಗಾದರೂ.

'ಅರ್ಜೆಂಟಾಗಿ ಎರಡು ಬಾಟ್ಲು ರಕ್ತ ಬೇಕಂತೆ'
ಮಗಳು 'ಬಾಗಿ' ಅರಚಿದಾಗ ಕೊರಗ ಎಚ್ಚೆತ್ತ.
'ಏಯ್, ಸ್ವಲ್ಪ ಹುಷಾರಾಗಿರು ಮಾರಾಯ್ತಿ,
ಯಾವ್ಯಾವ್ದೋ ರಕ್ತ ಕೊಟ್ಟು ನನ್ ಜಾತಿ ಕೆಡ್ಸಾರು...'
ಗಹಗಹಿಸಿ ನಕ್ಕು ಕೊರಗ ಕೆಮ್ಮಿದಾಗ
ಮಗ್ಗುಲಲ್ಲಿ ಮಲಗಿದ್ದ 'ದೊರೆ' ಕಣ್ತೆರೆದ...