Monday, May 13, 2019

ಮೋಡದೊಳಗಣ ಮೋಡವಾಗಿ...

  
ಮೋಡಗಳತ್ತ ಕಣ್ಣಾಯಿಸಿದಾಗ ನಾನಂದುಕೊಳ್ಳುತ್ತೇನೆ 
ನನ್ನ ಪ್ರೇಮವಿನ್ನೂ ಸಾಗಬಲ್ಲದೆಂದು 
ಮೋಡದೊಳಗಣ ಮೋಡವಾಗಿ ಭ್ರಮಿಸುತ್ತೇನೆ 
ನಿನ್ನೊಡನೆ ನಿರಂತರತೆಗೆ ನಾ ಹಾರಬಲ್ಲೆನೆಂದು
ಹಾರುತ್ತಾ ತೇಲುತ್ತಾ ನಿನ್ನೊಡನೆ ಅನಂತವನು ಸೇರಬಲ್ಲೆನೆಂದು

ಕೋಣೆಯೊಳಗಿಂದ ಹೊರಬಂದು ನೋಡೊಮ್ಮೆ ಮೋಡಗಳ 
ನೆನಪಿರಲಿ, ಮೋಡದೊಳಗಣ ಮೋಡವಾಗಿ ನಾನಿರುವೆನೆಂದು 
ನಿನ್ನ ಹುಡುಕುತ್ತಾ ತೇಲುತಿರುವೆ ಮೋಡವಾಗಿ 
ನಿನ್ನ ಕಣ್ಣ ಹನಿಯ ಸವಿಯ ನೋಡಲೆಂದು 
ಅದೇ ನನ್ನೊಡಲ ತೃಷೆಯ ತಣಿಸೋ ಅಮೃತಬಿಂದು   

ನಿನ್ನ ಕುಸುಮನೇತ್ರದೊಳಗೆ ಕಾಣುವುದೊಂದು ರಮ್ಯ ಜಗತ್ತು 
ಅಲ್ಲಿ ತುಂಟಚೇಷ್ಟೆಯಿದೆ, ಕೊಳಕು-ಕಪಟ ಲವಲೇಶವಿಲ್ಲ
ಕೊಂಡೊಯ್ಯಲೇ ಅಲ್ಲಿಂದ ಮೋಡಗಳ ಮೇಲೆ ನಿನ್ನ ಹೊತ್ತು?
ನಿನ್ನ ಕೆಂದುಟಿಯಂಚಿನ ಮುದ್ದು ನಗುವೇ ಹೇಳಿದೆಯಲ್ಲಾ 
ಆ ಮೋಡಗಳಂತೆ ನೀನೂ ಕೂಡಾ ಯಾರಿಗೂ ಸೇರದಾ ಸ್ವತ್ತು 

ಗೆಳತೀ, ಬರುವೆಯಾ ನನ್ನೊಡನೆ ಒಂದು ವಿಹಂಗಮ ಯಾತ್ರೆಗಾಗಿ? 
ಚಲಿಸೋಣ ಜೊತೆಯಾಗಿ ಪ್ರೇಮಜಲವ ಹೊತ್ತ ಮೋಡಗಳಾಗಿ 
ನೀ ನನ್ನವಳಾಗುವಿ ಎಂಬ ಹುಚ್ಚುಭ್ರಮೆ ನನಗಿಲ್ಲ, ತಿಳಿದಿರಲಿ
ನಿನ್ನೊಡನೆ ವಿಹಂಗಮಿಸುವ ಒಂದೇ ಬಯಕೆ ಸದಾ ನನ್ನೆದೆಯಲಿ 
ಬೇಡವೆನ್ನದಿರು ಗೆಳತೀ, ಬಾ ಅನಂತದಲಿ ಹಾರುವ ಮೋಡವಾಗಿ... 
 

Schön, dass Sie da sind…

  “Schön, dass Sie da sind” I was amused, excited and also confused What does it really connote? I asked google, searching for the immin...