Monday, March 28, 2011

ಒಂದು ವಿಚಾರಣೆ...

ಮೊನ್ನೆ ಬಿಸಿಲಿನಲ್ಲಿ ತಲೆಬಗ್ಗಿಸಿ ನಡೆಯುತಿದ್ದಾಗ
ಮಾರ, ನನ್ನ ಆಪ್ತ ಮಿತ್ರ, ಎದುರಾದ
'ಇದೇನಿದು, ಬರಬೇಗೆಯಲ್ಲಿ, ಬರಿಗಾಲಿನಲ್ಲಿ
ಎತ್ತ ನಡೆದಿರುವೆ? ಮನದಾಳದಲ್ಲಿ ಏನೋ 
ಲೆಕ್ಕಾಚಾರ ದಿಟವಾಗಿ ನಡೆಯುತ್ತಿದೆ
ಏನದು ಮಿತ್ರ? ಚಿಂತೆಯೋ, ಬೇನೆಯೋ,
ಕೋಪವೋ, ಅಸಹ್ಯವೋ? ಗುರುತಿಸಲು
ಅಶಕ್ತ ನಾನು, ಕ್ಷಮೆ ಇರಲಿ' ಎಂದ
ನನ್ನ ಕಣ್ಣುಗಳನ್ನೇ ದಿಟ್ಟಿಸುತ್ತಾ
ಎವೆಯಿಕ್ಕದೆ, ಆದರೂ ಧೈರ್ಯ ಸಾಲದೇ...

"ಊರಿನೆಡೆಗೆ, ಸಾದ್ಯವಾದರೆ ಊರಿನೊಳಗೆ... 
ಹೇಗೆ ನನ್ನನು ವಕ್ಕಣಿಸಲೆಂದು ಯೋಚಿಸುತಿರುವೆ
ಬೆನ್ನ ಬಗ್ಗಿಸಿಯೋ ಇಲ್ಲ ಎದೆ ನಿಗುರಿಸಿಯೋ
ಕಣ್ಣ ಕುಗ್ಗಿಸಿಯೋ ಇಲ್ಲ ನಿನ್ನಂತೆ ಎವೆಯಿಕ್ಕದೆಯೋ
ನನ್ನ ರೋಮದ ಮೇಲಂತೂ ನನಗೆ ನಂಬಿಕೆ ಇಲ್ಲ
ಸೆಟೆದು ನಿಂತು ಬಿಡುತ್ತದೆ ಎಷ್ಟೇ ಬೇಡವೆಂದರೂ
೨೦ ವರ್ಷಗಳಿಂದ ನಡೆಯುತ್ತಾ ಇದ್ದೇನೆ
ಯೋಚಿಸುತ್ತಾ ಹೇಗೆ ನಿಲ್ಲುವುದೆಂದು,
ಯಾರೂ ಕೇಳಿರಲಿಲ್ಲ ಈ ಹಿಂದೆ ಎತ್ತ ನಡೆದಿಹೆನೆಂದು
ಹೊರಟಿಹೆನು ಮಿತ್ರಾ, ನನ್ನ ಒಡೆಯನನು
ಕೇಳಲು 'ನನ್ನ ಆತ್ಮವನು ನನಗೆ ಕೊಡು' ಎಂದು ..."

ಕುಸಿದು ಬಿದ್ದ ಮಿತ್ರನನ್ನು ಹಿಡಿದು ನಿಲ್ಲಿಸುತ್ತಾ
ಪಿಸುರಿದೆ ಅವನ ಕಿವಿಯಲ್ಲಿ,
"ಮತ್ತೆ ೨೦ ವರ್ಷಗಳೇ ಬೇಕಾದಾವು,
ಅಥವಾ ಇನ್ನೂ ಹೆಚ್ಚು...
ಆದರೆ ಜಾರಿ ಇರಲಿ ಮಿತ್ರಾ,  ನಿನ್ನೀ ವಿಚಾರಣೆ,
ನನಗಾಗಿ, ನನ್ನ ಕದ್ದುಹೋದ ಆತ್ಮಕ್ಕಾಗಿ"
ಅವನ ಒದ್ದೆ ಕಣ್ಣುಗಳಲ್ಲಿ ನನ್ನ ಅಸ್ಪಷ್ಟ ಮೂರ್ತಿ
ಮೂರ್ತವಾದಾಗ ನನಗೆ ಹಿತವೆನಿಸಿತು
ನಡುಹಗಲ ಸೂರ್ಯನ ಜಳಪೂ
ಬೆಳದಿಂಗಳ ಮುತ್ತಿನಂತೆ ಮುದವೆನಿಸಿತು...