Wednesday, April 21, 2010

ತೊಗಲಿನ ಕನಸು...

ಬದುಕ ಅಂಗಳದಲಿ ನೂರು ಕನಸು
ಹೊತ್ತು ಸಾಗುವಾಗ ಎಲ್ಲೆಲ್ಲೂ ಬೆಳದಿಂಗಳು
ಬವಣೆ ಮೀರಿ ನಿಂತ ಗಳಿಗೆ
ಭಾವ-ಬವಣೆ ಎಲ್ಲಾ ಸ್ವಪ್ನಸ್ವತ್ತು
ಕಡೆಗೆ ಕನಸಿನಾಳವ ಹುಡುಕ ಹೊರಟವಗೆ
ಕತ್ತಲಾಳದಲಿ ಕಾಣಿಸಿದ್ದು ಬರೀ ನೆತ್ತರು...
ಮತ್ತು ಅದೇ ಇನ್ನಷ್ಟು...

ಕೊಳಕು ಚಿಂದಿ ತೊಗಲಿನ ಬಯಕೆಗೆ
ಮೆತ್ತಗೆ ನಕ್ಕವರು ಹಲವು ಮಂದಿ
ಇದಕ್ಯಾತಕೀ ಪರಿ ಅಸಹ್ಯ ಕನವು
ಪರಿತಪಿಸಿದ ದನಿಗಳು ಮತ್ತೆ ಹಲವು
ಕಂಡೂ ಕಾಣದ ಅದೆಷ್ಟೋ ಕನವುಗಳ
ಅಂಡಡಿಯೇ ಮುದುಡುವ ಕಸರತ್ತು
ಕೊನೆಯಾದದ್ದು ಮತ್ತೊಂದು ಹೊಸಾ ಕನಸಿನೊಳು.

ಅವು ಕೆಲವೊಮ್ಮೆ ತೊಗಲಿನಷ್ಟೇ ಒರಟು
ಮತ್ತೊಮ್ಮೊಮ್ಮೆ ಅದರಷ್ಟೇ ಕೋಮಲ
ಒಂದು ರಾತ್ರಿ ವೀಣೆಯ ನಾದ
ಮರು ಹಗಲು ತಂತಿ ಹರಿದ ಪಿಟೀಲು
ಕಡೆಗೆ ಕೇಳಿಸಿದ್ದು ಮತ್ತೆ ಮತ್ತೆ
ಮದುರ-ಕರ್ಕಶ ಲಹರಿ,
ಅದು ತೊಗಲಿನಷ್ಟೇ ಒರಟು
ಮತ್ತೆ ತೊಗಲಿನಷ್ಟೇ ಸೊಗಸು

ಸ್ವಾತಂತ್ರ್ಯದ ಕನಸು ಈಗ ದುಬಾರಿ
ಆದರೂ ಕೆಲವೊಮ್ಮೆ ಅನ್ನಿಸುವುದು
ಯಾಕೆ ನೆತ್ತರಲಿ ಕೊನೆಯಾಗದೀ ದುಬಾರಿ ಕನಸು?
ಮರುಕ್ಷಣವೇ ಕಾಡುವುದು ಜೀವಭಯ
ಇಲ್ಲಿ ಬಿದ್ದರೆ ಸಾಕು ಮುಂದೆ ಮತ್ತೆಲ್ಲಿಯೋ
ಏಳುವ, ಎದ್ದು ನೆತ್ತರಲಿ ಮಿಂದು ಶುದ್ಧವಾಗುವ
ಈ ತೊಗಲಿನ ಕನಸು ಹೇಗೆ ತಾನೇ ಕೊನೆಯಾದೀತು?