Thursday, January 7, 2010

ನನ್ನ ಪ್ರೇಮ...

ಅಸಂಖ್ಯ ಕ್ಷಣಗಳಲಿ ಯಾರಿಗೂ ತಿಳಿಯದೆ
ಅಮಿತ ಮುಖಗಳಲಿ ಮೀರಿಯೂ ಮೆರೆಯದೆ
ಅನಂತ ಕಾಮದಲಿ ಏರಿಯೂ ಇಳಿಯದೆ
ಅಜಾತ ಕಾವ್ಯದಲಿ ಸೇರಿಯೂ ಸುರಿಯದೆ
ತಿಳಿಯಾಗಿ ಹರಿವ ಇಳಿಮುಖದ ಹಿಮಮಳೆ ನನ್ನ ಪ್ರೇಮ...

ಎಲ್ಲಿಯೋ ಉದಿಸಿ ಮತ್ತೆಲ್ಲಿಯೋ ಮದಿಸಿ
ಸಾಲುಸಾಲಾಗಿ ಸುರಿದು ಮತ್ತಿನಲಿ ಮಣಿದು
ಕಾಲ್ಸೆಳೆಯಲಿ ಜ್ವಾಲೆಯಾಗಿ ಮತ್ತೆ ಬಾಲೆಯಾಗಿ
ಮೆಲುದನಿಯ ಮೊನಚಾದ ಕವಿತೆಯಾಗಿ
ಸೆಳೆವ ಸೆಳೆತದ ಹಿಮಮಳೆ ನನ್ನ ಪ್ರೇಮ...

ಹಿತವಾದ ಹನಿಯಾಗಿ ಬಿದ್ದ ಕಾಮ
ಹಿಮಾಲಯದ ಏರಿಳಿತದ ಸಂಯಮ
ಎನಿತೋ ತಿಳಿದೂ ತಿಳಿಯದ ಮಧುಮರ್ಮ
ಕೇಳಿತೋ... ಇಲ್ಲಾ ಕಾಲುವೆಯಾಗಿ ಇಳಿಯಿತೋ
ಅದೇ ಸುರಿಸುರಿದು ಸುರಿವ ಹಿಮಮಳೆ ನನ್ನ ಪ್ರೇಮ...

ಮೆತ್ತಗಿನ ಮಂಚವಲ್ಲ; ಆಣಿಗಳ ಏಣಿ
ಸುತ್ತಲಿನ ಭಯವಂತೂ ಇಲ್ಲ; ಒಳಗೆ ಮಹಾಗಣಿ
ಬೆತ್ತಲಿನ ದೇಹದಲಿ ವಿಧ-ವಿಧದ ಕಾಮಕೇಳಿ
ಕತ್ತಲಿನ ಸುತ್ತ ಸುಳಿದು, ಕಾಡಿ, ಮತ್ತೆ ಬೇಡಿ
ಚಿತ್ರ ವಿಚಿತ್ರವಾಗಿ ಗೋಗರೆವ ಹಿಮಮಳೆ ನನ್ನ ಪ್ರೇಮ...